ಧರ್ಮಪಾಲ 3   -

ಬಂಗಾಲ ಬಿಹಾರಗಳನ್ನಾಳಿದ ಪಾಲ ವಂಶದ ಎರಡನೆಯ ದೊರೆ.  ಅದರ ಸ್ಥಾಪಕನಾದ ಗೋಪಾಲನ ಮಗ.  ಬಂಗಾಲವನ್ನಾಳಿದ ಮಹತ್ತ್ವದ ದೊರೆಗಳಲ್ಲೊಬ್ಬ.  ಈತ ಬಹುಶಃ 752 - 794 ರ ನಡುವೆ ಸಿಂಹಾಸನವನ್ನೇರಿರಬೇಕು.  ಇವನು ಕನಿಷ್ಠ ಮೂವತ್ತೆಡರು ವರ್ಷಗಳ ಕಾಲ ರಾಜ್ಯವಾಳಿದ.  ತನ್ನ ದೀರ್ಘ ಆಳ್ವಿಕೆಯ ಕಾಲದಲ್ಲಿ ಇವನು ಪಾಲರ ಕೀರ್ತಿ ಮತ್ತು ಪ್ರಾಬಲ್ಯಗಳಿಗೆ ಬಲವಾದ ತಳಪಾಯ ಹಾಕಿದನಲ್ಲದೆ, ಸಾಮ್ರಾಜ್ಯವನ್ನು ವಿಸ್ತರಿಸಿದ.  ತನ್ನ ಆಳ್ವಿಕೆಯ ಮೂವತ್ತೆರಡನೆಯ ವರ್ಷದಲ್ಲಿ ಕನೌಜಿನ ಮೇಲೆ ದಂಡೆತ್ತಿ ಹೋಗಿ ಅದರ ರಾಜನಾದ ಇಂದ್ರಾಯುಧನನ್ನು ಸೋಲಿಸಿ ತನ್ನ ಆಶ್ರಿತವಾದ ಚಕ್ರಾಯುಧನನ್ನು ಅಲ್ಲಿಯ ಸಿಂಹಾಸನದ ಮೇಲೆ ಕೂಡಿಸಿದ.  ಆ ಸಂದರ್ಭದಲ್ಲಿ ಅವನು ಕನೌಜಿನಲ್ಲಿ ನಡೆಸಿದ ಭವ್ಯ ಒಡ್ಡೋಲಗದಲ್ಲಿ ಭೋಜ, ಮತ್ಸ್ಯ, ಮಾದ್ರ, ಕುರು, ಯದು, ಯವನ, ಅವಂತಿ ಮತ್ತು ಗಾಂಧಾರಗಳ ರಾಜರುಗಳು ಹಾಜರಿದ್ದು ಅವನ ಸಾರ್ವಭೌಮತ್ವವನ್ನು ಒಪ್ಪಿಕೊಂಡರೆಂದು ತಿಳಿದುಬರುತ್ತದೆ.  ಇದರಿಂದಾಗಿ ಅವನು ಉತ್ತರಾಪಥ ಸ್ವಾಮಿಯೆನಿಸಿಕೊಂಡ.  ಸ್ವಲ್ಪ ಕಾಲದಲ್ಲೇ ಧರ್ಮಪಾಲನಿಗೂ ಪ್ರತೀಹಾರರ ದೊರೆಯಾದ ವತ್ಸರಾಜನಿಗೂ ಯುದ್ಧ ನಡೆದು ಧರ್ಮಪಾಲ ಸೋತುಹೋದ.  ಆದರೆ ದಕ್ಷಿಣದಿಂದ ದಂಡೆತ್ತಿ  ಬಂದಿದ್ದ ರಾಷ್ಟ್ರಕೂಟ ಧ್ರುವ ಧಾರಾವರ್ಷನಿಗೆ ಇಬ್ಬರೂ ಸೋತರು.  ರಾಷ್ಟ್ರಕೂಟರ ದಾಳಿಯಿಂದಾಗಿ ಪ್ರತೀಹಾರರ ಪ್ರಾಬಲ್ಯ ಕುಂದಿತು. ಈ ಸದವಕಾಶವನ್ನುಪಯೋಗಿಸಿಕೊಂಡ ಧರ್ಮಪಾಲ ಉತ್ತರ ಭಾರತದ ಸಾರ್ವಭೌಮನಾದ.  ಆದರೆ ವತ್ಸರಾಜ ಅನಂತರ ಪ್ರತೀಹಾರರ ರಾಜನಾದ ಎರಡನೆಯ ನಾಗಭಟ ಕನೌಜನ್ನು ಮುತ್ತಿ ಚಕ್ರಾಯುಧನನ್ನು ಓಡಿಸಿದ.  ತನ್ನ ಆಶ್ರಿತನನ್ನು ಉಳಿಸಲು ಧರ್ಮಪಾಲ ನಾಗಭಟನ ಮೇಲೆ ಯುದ್ಧ ಮಾಡಿದ.  ಆದರೆ ಅದರಲ್ಲಿ ಸೋತುಹೋದ.  ರಾಷ್ಟ್ರಕೂಟ ಗೋವಿಂದನ ದಾಳಿಯಿಂದ ನಾಗಭಟ ಸೋತುದರಿಂದ ಧರ್ಮಪಾಲ ತನ್ನ ಪ್ರಾಬಲ್ಯವನ್ನು ಮತ್ತೊಮ್ಮೆ ಹೆಚ್ಚಿಸಿಕೊಳ್ಳುವಂತಾಯಿತು.  ತನ್ನ ಕೊನೆಗಾಲದ ವರೆಗೆ ಈತ ಸಾಹಸಿ ದೊರೆಯಾಗಿಯೇ ಉಳಿದು ವಿಸ್ತಾರವಾದ ಸಾಮ್ರಾಜ್ಯವನ್ನಾಳಿದ.  ಧರ್ಮಪಾಲ 810 ರಲ್ಲಿ ಸತ್ತನೆನ್ನಲಾಗಿದೆ.  ಈತ 794ರ ಅನಂತರ, ಆದರೆ 839 ಕ್ಕಿಂತ ಮುಂಚೆ ಸತ್ತಿರಬೇಕೆಂದು ಒಂದು ಹೇಳಿಕೆ.  ಧರ್ಮಪಾಲನ ಸಾಮ್ರಾಜ್ಯ ಪೂರ್ವದಲ್ಲಿ ಬಂಗಾಳ ಕೊಲ್ಲಿಯಿಂದ ಪಶ್ಚಿಮದಲ್ಲಿ ದೆಹಲಿಯ ವರೆಗೆ  ಮತ್ತು ಉತ್ತರದಲ್ಲಿ ಜಲಂಧರಿನಿಂದ ದಕ್ಷಿಣದಲ್ಲಿ ವಿಂದ್ಯ ಪರ್ವತಗಳ ವರೆಗೆ ಹಬ್ಬಿತ್ತೆಂದು ಟಿಬೆಟನ್ ಚರಿತ್ರÀಕಾರ ತಾರಾನಾತನ ಬರವಣಿಗೆಯಿಂದ ತಿಳಿದುಬರುತ್ತದೆ.

	ಧರ್ಮಪಾಲ ಮಹಾವಿಜೇತನೂ ಸಾಮ್ರಾಜ್ಯ ಸ್ಥಾಪಕನೂ ಅಲ್ಲದೆ ಸುಸಂಸ್ಕøತ ದೊರೆಯೂ ಆಗಿದ್ದ.  ಆತ ಧರ್ಮನಿಷ್ಠ, ಬೌದ್ಧ ಮತಾನುಯಾಯಿ.  ಅವನಿಂದ ಮಹಾಯಾನ ಪಂಥಕ್ಕೆ ಹೆಚ್ಚಿನ ಪ್ರೋತ್ಸಾಹ ದೊರಕಿತು.  ವಿದ್ಯಾಪ್ರೇಮಿ ಧರ್ಮಪಾಲ ವಿಕ್ರಮಶಿಲಾ ಮತ್ತು ಉದಂತಪುರಿಗಳಲ್ಲಿ ಬೌದ್ಧ ವಿಹಾರಗಳನ್ನು ಕಟ್ಟಿಸಿದ.  ಅವು ಮುಂದೆ ಬೆಳೆದು ಉನ್ನತ ಶಿಕ್ಷಣ ಕೇಂದ್ರಗಳಾದವು ;  ವಿಶ್ವವಿದ್ಯಾಲಯಗಳಾದವು.  ಈತ ಐವತ್ತಕ್ಕೂ ಹೆಚ್ಚು ವಿಹಾರಗಳನ್ನು ಧಾರ್ಮಿಕ ಸಂಸ್ಥೆಗಳನ್ನು ಸ್ಥಾಪಿಸಿದನೆಂದು ತಾರನಾಥ ಹೇಳಿದ್ದಾನೆ.  ಕವಿಗಳಿಗೂ ವಿದ್ವಾಂಸರಿಗೂ ಪೋಷಕನಾಗಿದ್ದ ಅವನು ಹರಿಭದ್ರ ಎಂಬ ಬೌದ್ಧ ವಿದ್ವಾಂಸರಿಗೆ ಆಶ್ರಯ ನೀಡಿದ್ದ.
									(ಕೆ.ವಿ.ಐ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ